Friday 16 November 2007

ಶುಕ್ರನ ಕಂಡಿರಾ?

ಇವತ್ತು ನನ್ನ ಮನೆಯವರು ಹೈದರಾಬಾದಿಗೆ ಬರುತ್ತಿದ್ದರಿಂದ, ನಾನು ಬೆಳಗ್ಗೆ ೫ಕ್ಕೆ ಎದ್ದು ರೈಲು ನಿಲ್ದಾಣಕ್ಕೆ ಹೊರಡಲು ಸಿದ್ದನಾಗಿ, ಮನೆಯಿಂದ ಹೊರಗಡೆ ಬಂದೆ. ನನ್ನ ಮನೆ ಪೂರ್ವ ದಿಕ್ಕಿನ ಕಡೆ ಮುಖ ಮಾಡಿದೆ. ಹಾಗಾಗಿ, ನನಗೆ ತಕ್ಷಣ ಆಕಾಶದಲ್ಲಿ ಮಿನುಗುತ್ತಿದ್ದ ಒಂದು ತಾರೆ ಕಾಣಿಸಿತು. ಅದರ ಪ್ರಭೆ ನೋಡಿ ಅದು ಶುಕ್ರ ಗ್ರಹ ಎಂದು ಖಾತ್ರಿಯಾಯಿತು. ಶುಕ್ರ ಗ್ರಹವನ್ನು ಬೆಳಗಿನ ಜಾವ ನೋಡಿ ಬಹಳ ದಿವಸ ಆಗಿತ್ತು.

ಶುಕ್ರ (ಇಂಗ್ಲಿಶ್ನಲ್ಲಿ ವೀನಸ್) ಒಂದು ಅಭೂತಪೂರ್ವ ಗ್ರಹ. ಬಹಳ ಹೊಳಪಾಗಿ ಕಾಣುತ್ತದೆ. ಸೂರ್ಯ ಮತ್ತು ಚಂದ್ರರ ನಂತರ ಬಹಳ ಪ್ರಕಾಶಮಾನವಾಗಿ ಕಾಣುವ ಕಾಯ ಇದು. ವರ್ಷದ ಪ್ರಾರಂಭದಲ್ಲಿ ಇದು ಸಂಜೆಯ ಹೊತ್ತಿಗೆ ಪಶ್ಚಿಮ ದಿಕ್ಕಿನಲ್ಲಿ ಕಾಣುತ್ತದೆ. ವರ್ಷದ ಕೊನೆಯಲ್ಲಿ ಇದು ಬೆಳಗಿನ ಜಾವ ಪೂರ್ವ ದಿಕ್ಕಿನಲ್ಲಿ ಕಾಣುತ್ತದೆ. ಅದಕ್ಕೆ ಇದನ್ನು ಇಂಗ್ಲಿಷ್ನಲ್ಲಿ Evening Star ಮತ್ತು Morning Star ಎಂದು ಕರೆಯುತ್ತಾರೆ. (Star ಎಂದರೆ ನಕ್ಷತ್ರ ಎಂದು. ಆದರೆ ಶುಕ್ರ ಒಂದು ಗ್ರಹ).

ಶುಕ್ರ ಗಾತ್ರದಲ್ಲಿ ಭೂಮಿಯನ್ನು ಹೋಲುತ್ತದೆ. ಸೂರ್ಯನಿಂದ ಎರಡನೆ ಹತ್ತಿರದ ಗ್ರಹ (ಬುಧ ಸೂರ್ಯನ ಸಮೀಪವಿರುವ ಗ್ರಹ). ಶುಕ್ರನ ನಂತರ ಭೂಮಿ ಇದೆ. ಭೂಮಿಗೆ ಸಮೀಪವಿರುವ ಗ್ರಹ ಈ ಶುಕ್ರ. ಭೂಮಿಗೆ ಚಂದ್ರನಿರುವಂತೆ, ಶುಕ್ರನಿಗೆ ಉಪಗ್ರಹವಿಲ್ಲ. ಶುಕ್ರ ತಿರುಗುವ ರೀತಿ ಭೂಮಿಗೆ ತತ್ವಿರುದ್ದ. ಭೂಮಿಯಲ್ಲಿ ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ. ಆದರೆ ಶುಕ್ರನಲ್ಲಿ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗುತ್ತಾನೆ! ಶುಕ್ರನ ಒಂದು ದಿನ ಭೂಮಿಯ ೨೪೩ ದಿನಗಳಿಗೆ ಸಮ! ಆದರೆ ಶುಕ್ರನಲ್ಲಿ ವಾಸಿಸಲು ಸಾದ್ಯವಿಲ್ಲ. ಶುಕ್ರನಲ್ಲಿ ಶೆಕೆ ಬಹಳ ಜಾಸ್ತಿ (ಸುಮಾರು ೪೬೦ ಡಿಗ್ರಿ!).

ನಮ್ಮ ಪುರಾಣದ ಪ್ರಕಾರ, ಶುಕ್ರ ಭ್ರುಗು ಮಹರ್ಷಿಯ ಪುತ್ರ. ಹಾಗು ಅಸುರರ ಗುರು.

ಆಕಾಶದಲ್ಲಿ ಶುಕ್ರನನ್ನು ನೋಡುವುದೇ ಚೆನ್ನ.

No comments: